ಬೆಳವಾಡಿ
ಕರ್ನಾಟಕ ರಾಜ್ಯದ ಚಿಕ್ಕಮಗಳೂರು ತಾಲ್ಲೂಕಿನ ಒಂದು ಗ್ರಾಮ. ಚಿಕ್ಕಮಗಳೂರಿನಿಂದ ಪೂರ್ವಕ್ಕೆ 20 ಕಿಮೀ ದೂರದಲ್ಲಿ ಬಾಣಾವರ ಮಾರ್ಗದಲ್ಲಿ ಇದೆ. ಜನಸಂಖ್ಯೆ 2,003. (1971) ಇಲ್ಲಿಯ ವೀರನಾರಾಯಣ ದೇವಾಲಯದಿಂದ ಈ ಗ್ರಾಮ ಪ್ರಸಿದ್ಧವಾಗಿದೆ. ಇದು ಹೊಯ್ಸಳ ಶೈಲಿಯ ತ್ರಿಕೂಟಾಚಲ. ಬಹುಶಃ ಕರ್ನಾಟಕದ ತ್ರಿಕೂಟಾಚಲ ದೇವಾಲಗಳಲ್ಲಿ ದೊಡ್ಡದು ಹಾಗೂ ಸುಂದರವಾದುದು. 1760ರಲ್ಲಿ ಮೈಸೂರು ದೊರೆ ಇಮ್ಮಡಿ ಕೃಷ್ಣರಾಜ ಒಡೆಯರು ಈ ಗ್ರಾಮವನ್ನು ಶೃಂಗೇರಿ ಮಠಕ್ಕೆ ಜಹಗೀರಿಯಾಗಿ ನೀಡಿದ್ದರು. ಹೊಯ್ಸಳರ ಕಾಲದಲ್ಲಿ ಇದೊಂದು ಜೈನ ಕೇಂದ್ರವಾಗಿತ್ತೆಂದು ಶಾಸನಗಳಿಂದ ತಿಳಿದುಬರುತ್ತದೆ. ಆದರೆ ಈಗ ಯಾವ ಕುರುಹ ಉಳಿದಿಲ್ಲ. ಗ್ರಾಮದ ಬಳಿಯಲ್ಲಿ ಮೈಲುತುತ್ತದ ಗುಹೆಗಳಿವೆ. ಇಲ್ಲಿ ಹಸಿರು ಶಿಲೆ (ಪಚ್ಚೆಕಲ್ಲು) ದೊರೆಯುತ್ತದೆ. 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ